ಕ್ರೇಷಾ, ರಿಚರ್ಡ್ 
1613-1649. ಆಂಗ್ಲಕವಿ. ಪಾದ್ರಿಯ ಮಗ. ಹುಟ್ಟಿದ್ದು ಲಂಡನಿನಲ್ಲಿ. ಚಾರ್‍ಟರ್ ಹೌಸ್ ಮತ್ತು ಕೇಂಬ್ರಿಜ್‍ನಲ್ಲಿ ವ್ಯಾಸಂಗ ನಡೆಸಿದ ಈತ ಪೀಟರ್ ಹೌಸ್‍ನಲ್ಲಿ ಫೆಲೋ ಆದ. ಅಲ್ಲಿಯ ಧಾರ್ಮಿಕ ಆಚರಣೆ ಮತ್ತು ಕರಾರುಗಳನ್ನು ಒಪ್ಪದೇ ಇದ್ದುದರಿಂದ ಅಲ್ಲಿಂದ ಉಚ್ಛಾಟನೆಗೊಂಡ ಅನಂತರ ಫ್ರಾನ್ಸಿಗೆ ಹೋಗಿ ರೋಮನ್ ಕೆಥೊಲಿಕ್ ಪಂಗಡಕ್ಕೆ ಸೇರಿದ. ಅಲ್ಲಿ ಅನೇಕ ಕಷ್ಟನಷ್ಟಗಳಿಗೆ ಸಿಲುಕಿ ಹೊಟ್ಟೆಗೆ ಅನ್ನವಿಲ್ಲದೆ ಉಪವಾಸ ಮಾಡಿದ. ಆದರೆ ತನ್ನ ಸ್ನೇಹಿತ ಏಬ್ರಹಾಂ ಕೌಲಿಯ ಸಹಾಯದಿಂದ ರಾಣಿ ಹೆನ್ರಿಯಟ ಮರಿಯಳ ಪರಿಚಯ ಮಾಡಿಕೊಂಡು ಅವಳಿಂದ ಸಕಾಲಿಕ ಸಹಾಯ ಪಡೆದು ಚೇತರಿಸಿಕೊಂಡ. ಈತ ಮೊದಮೊದಲು ಬರೆದ ಲ್ಯಾಟಿನ್ ಮತ್ತು ಗ್ರೀಕ್ ಕವನಗಳು 1634ರಲ್ಲಿ ಪ್ರಕಟಗೊಂಡವು. ಈತನ ಅತ್ಯುತ್ತಮ ಗ್ರಂಥವಾದ ಸ್ಟೆಪ್ಸ್ ಟು ದಿ ಟೆಂಪಲ್ (1646) ಎಂಬ ಕವನ ಸಂಕಲನದಲ್ಲಿ ಧಾರ್ಮಿಕ ಗೀತೆಗಳಿವೆ. ಕವಿ ಇಲ್ಲಿ ಹರ್ಬರ್ಟನ ಶೈಲಿಯನ್ನು ಅನುಕರಿಸಿದ್ದಾನೆ. ಈತ ಶ್ರೇಷ್ಠವಾದ ಧರ್ಮ ಬೋಧಕ ಕವಿ ಮತ್ತು ವಿದ್ವಾಂಸನಾಗಿದ್ದ. ಈತನ ಜ್ಞಾಪಕಾರ್ಥವಾಗಿ ಗೆಳೆಯ ಕೌಲಿ ಒಂದು ಭಾವಗೀತೆಯನ್ನು ಬರೆದಿದ್ದಾನೆ.
(ಎನ್.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ